12 March, 2009

ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ ?

ಇರೋಬರೋ ಹೊಣೆಯನ್ನು ನಾವೇ ಒಂದಷ್ಟು ಮಂದಿ ಹೊತ್ತುಕೊಂಡು ಹೆಣಗಾಡುತ್ತಿದ್ದೇವೆ ಎಂದು ಎನಿಸಿದರೆ ಈ ಐಡಿಯಾ ಹೊಣೆಯ ಹೊರೆಯನ್ನು ಒಂದಷ್ಟು ತಗ್ಗಿಸಬಹುದು :
ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ ? ಅವಕ್ಕೆನಿತು ಶಾಂತಿ, ಎನಿತು ತೃಪ್ತಿ !
ನೋಡುತ್ತ ನಿಂತೆನೆಂದರೆ ಘಂಟೆಘಂಟೆ ಹರಿದರೂ ಹೊತ್ತು ಗೊತ್ತಾಗುವುದಿಲ್ಲ.
ತಮ್ಮ ಇರವಿಗೆ ಮರುಗಿ ಅವು ಕುದಿಯುವುದಿಲ್ಲ, ಬಾಯಿ ಬಡಿದುಕೊಳ್ಳುವುದಿಲ್ಲ, ಪರದಾಡುವುದಿಲ್ಲ.
ಇರುಳೆಲ್ಲ ನಿದ್ದಗೆಟ್ಟು ಪಾಪಗಳಿಗಾಗಿ ಪಶ್ಚಾತ್ತಾಪಪಡುವುದಿಲ್ಲ.
ದೇವರು ಧರ್ಮಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಾ ನನಗೆ ರೇಜಿಗೆ ಹಿಡಿಸುವುದಿಲ್ಲ.
ಅವುಗಳಲ್ಲಿ ಯಾವೊಂದಕ್ಕೂ ಅತ್ಯಾಸೆಯಿಲ್ಲ, ಯಾವೊಂದೂ ವಸ್ತುಗಳಿಗೆ ಒಡೆಯನಾಗಬೇಕೆಂದು ತಲೆಕೆಡಿಸಿಕೊಂಡಿಲ್ಲ.
ಒಂದಾದರೂ ಮತ್ತೊಂದಕ್ಕೆ ಮೊಣಕಾಲು ಮಣಿಯುವುದಿಲ್ಲ, ಕಾಲಿಗೆ ಬೀಳುವುದಿಲ್ಲ, ಜೊತೆ ಇರುವವಕ್ಕಾಗಲಿ, ಶತಮಾನಗಳಿಗೆ ಹಿಂದೆ ಬದುಕಿದ್ದವುಗಳಿಗಾಗಲಿ..
ಯಾವೊಂದೂ ಶ್ರೀ ಶ್ರೀ ಶ್ರೀಯಾಗಿಲ್ಲ ; ಹುಡುಕಿದರೂ ಮತ್ಸರದ ಅಸುಖ ದೊರೆಯುವುದಿಲ್ಲ.
ಯಾವೊಂದೂ ಬಿರುದುವೊತ್ತು ಗೌರವಪದವಿಗೇರಿಲ್ಲ.

- ವಾಲ್ಟ್ ವಿಟ್ಮನ್ ಕವಿ ವಚನದ ಕನ್ನಡ ಅನುವಾದ ಕುವೆಂಪು ಅವರಿಂದ

No comments:

Post a Comment